ವಿಜಯಪುರ, ಜುಲೈ 10 : ದಶಕಗಳ ಬೇಡಿಕೆಗೆ ಕೊನೆಗೂ ಒಪ್ಪಿಗೆ ಸಿಕ್ಕಿದೆ. ಕರ್ನಾಟಕ ಸರ್ಕಾರ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸುಮಾರು 220 ಕೋಟಿ ರೂ.ಗಳು ಯೋಜನೆ ಇದಾಗಿದೆ. ಗುರುವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಮಾನ ನಿಲ್ದಾಣ ಯೋಜನೆಗೆ ಒಪ್ಪಿಗೆ ಕೊಡಲಾಗಿದೆ. ಒಟ್ಟು 2 ಹಂತದಲ್ಲಿ ಯೋಜನೆ ಕಾಮಗಾರಿ ನಡೆಯಲಿದ್ದು, ಮೊದಲ ಹಂತದ ಕಾಮಗಾರಿಗೆ 95 ಕೋಟಿ ರೂ. ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ.
ವಿಜಯಪುರದ ಮದಭಾವಿ-ಬುರಣಾಪುರ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಇದಕ್ಕಾಗಿ 727 ಎಕರೆ ಜಮೀನು ಬಳಕೆಯಾಗಲಿದೆ. ವಿಜಯಪುರ ನಗರದಿಂದ ವಿಮಾನ ನಿಲ್ದಾಣದ ಸ್ಥಳ ಸುಮಾರು 15 ಕಿ. ಮೀ. ದೂರವಿದೆ.
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಭೂಮಿ ಪೂಜೆ ಮಾಡಲಾಗಿತ್ತು. ಆದರೆ, ಸರ್ಕಾರಗಳು ಬದಲಾದ ಬಳಿಕ ಯೋಜನೆಗೆ ಅನುದಾನ ಸಿಗದೆ ವಿಳಂಬವಾಯಿತು.
ಎರಡು ವರ್ಷಗಳ ಹಿಂದೆ ವಿಮಾನ ನಿಲ್ದಾಣ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಸತತ ಹೋರಾಟದ ಫಲವಾಗಿ ಈಗ ಸರ್ಕಾರ ವಿಮಾನ ನಿಲ್ದಾಣ ನಿರ್ಮಿಸಲು ಒಪ್ಪಿಗೆ ನೀಡಿದೆ. ಒಂದು ವರ್ಷದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸಚಿವ ಸಂಪುಟ ಸಭೆಯ ವಿವರ ನೀಡಿದ ಸಚಿವ ಜೆ. ಸಿ. ಮಾಧುಸ್ವಾಮಿ, “ವಿಜಯಪುರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ 220 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಒಂದು ವರ್ಷದಲ್ಲಿ ಈ ನಿಲ್ದಾಣವನ್ನು ಅಭಿವೃದ್ಧಿಪಡಿಸಲಿದೆ” ಎಂದು ಹೇಳಿದರು.